ಹೆಗ್ಗಡದೇವನಕೋಟೆ
	ಭಾರತದ ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಜಿಲ್ಲೆಯ ದಕ್ಷಿಣಕ್ಕಿರುವ ಈ ತಾಲ್ಲೂಕನ್ನು ಉತ್ತರದಲ್ಲಿ ಹುಣಸೂರು, ಈಶಾನ್ಯದಲ್ಲಿ ಮೈಸೂರು, ಪೂರ್ವದಲ್ಲಿ ನಂಜನಗೂಡು, ಆಗ್ನೇಯದಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕುಗಳೂ ಪಶ್ಚಿಮ ಮತ್ತು ದಕ್ಷಿಣದಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕೂ ಮತ್ತು ಕೇರಳ ರಾಜ್ಯವೂ ಸುತ್ತುವರಿದಿವೆ. ಹಂಪಾಪುರ, ಹೆಗ್ಗಡದೇವನಕೋಟೆ, ಸರಗೂರು, ಕಂದಲಿಕೆ ಮತ್ತು ಅಂತರಸಂತೆ ಹೋಬಳಿಗಳು. ಎರಡು ಪಟ್ಟಣಗಳೂ 281 ಗ್ರಾಮಗಳೂ ಇವೆ. ತಾಲ್ಲೂಕಿನ ವಿಸ್ತೀರ್ಣ 1,606.3 ಚ.ಕಿಮೀ. ಜನಸಂಖ್ಯೆ 2,42,615. 

	ಈ ತಾಲ್ಲೂಕಿನಲ್ಲಿ ಪಶ್ಚಿಮಘಟ್ಟ ಶ್ರೇಣಿಯಿದ್ದು ತಾಲ್ಲೂಕಿನ ಪೂರ್ವ ಭಾಗವೆಲ್ಲ ಈ ಘಟ್ಟಶ್ರೇಣಿಯ ನೆರಳಿನಲ್ಲಿದೆ ಎನ್ನಬಹುದು. ತಾಲ್ಲೂಕಿನ ಪಶ್ಚಿಮ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಅರಣ್ಯಗಳಿವೆ. ರಕ್ಷಿತ ಅರಣ್ಯ ಪ್ರದೇಶಗಳಿದ್ದು ಆನೆ, ಕಾಡುಕೋಣ, ಜಿಂಕೆ ಮುಂತಾದ ಕಾಡುಪ್ರಾಣಿಗಳೂ ಬೆಲೆಬಾಳುವ ಮರಗಳೂ ಈ ಕಾಡಿನಲ್ಲಿವೆ. ಬೆಟ್ಟಗುಡ್ಡಗಳಿಂದ ಕೂಡಿದ ಈ ತಾಲ್ಲೂಕಿನ ಮುಖ್ಯನದಿ ಕಪಿಲಾ. ಈ ನದಿ ತಾಲ್ಲೂಕಿನ ನೈಋತ್ಯದಲ್ಲಿ ಮೊದಲು ಕೇರಳ ರಾಜ್ಯವನ್ನು ಬೇರ್ಪಡಿಸುವ ಗಡಿಯಾಗಿ ಸ್ವಲ್ಪದೂರ ಹರಿದು ಅನಂತರ ಬೇಗೂರು ಅರಣ್ಯ ಪ್ರದೇಶದ ಪಶ್ಚಿಮದಲ್ಲಿ ತಾಲ್ಲೂಕನ್ನು ಪ್ರವೇಶಿಸುತ್ತದೆ. ಮುಂದೆ ಮೇಲುಕೋಟೆ ಗ್ರಾಮದವರೆಗೂ ಉತ್ತರಾಭಿಮುಖವಾಗಿ ಹರಿಯುವುದು. ಅಲ್ಲಿ ಬರಲಹೊಳೆಯನ್ನು ಕೂಡಿಕೊಂಡು ಕನಕನಹಳ್ಳಿವರೆಗೂ ಪೂರ್ವಾಭಿಮುಖವಾಗಿ ಪ್ರವಹಿಸುವುದು. ಅಲ್ಲಿಂದ ಉತ್ತರಕ್ಕೆ ಏರಿ ಹೊನ್ನೂರುಕುಪ್ಪೆಯಿಂದ ದಕ್ಷಿಣಾಭಿಮುಖವಾಗಿ ಮತ್ತೆ ಉತ್ತರಾಭಿಮುಖವಾಗಿ ತಿರುಗಿ ಜಿಯರ ಗ್ರಾಮದವರೆಗೆ ಹರಿದು ಅಲ್ಲಿಂದ ಅಂಕುಡೊಂಕುಗಳೊಡನೆ ಸರಗೂರುವರೆಗೆ ಹರಿಯುವುದು. ಮತ್ತೆ ಹೆಗ್ಗಡದೇವನಕೋಟೆ ಹೋಬಳಿಯ ಮಟಕೆರೆವರೆಗೂ ಉತ್ತರಾಭಿಮುಖವಾಗಿ ಹರಿದು ಅನಂತರ ಪೂರ್ವಾಭಿಮುಖವಾಗಿ ನಂಜನಗೂಡು ತಾಲ್ಲೂಕನ್ನು ಪ್ರವೇಶಿಸುವುದು. ಇಲ್ಲಿ ನಂಜನಗೂಡು ಮತ್ತು ಹೆಗ್ಗಡದೇವನ ಕೋಟೆ ತಾಲ್ಲೂಕುಗಳ ಗಡಿಯಾಗಿ ಸ್ವಲ್ಪ ದೂರ ಹರಿಯುವುದು. ಮಟಕೆರೆ ಬಳಿ ಕಪಿಲಾನದಿಗೆ ಸೇರುವ ತಾರಕಾನದಿ ತಾಲ್ಲೂಕಿನ ಪಶ್ಚಿಮದಿಂದ ಪೂರ್ವಾಭಿಮುಖವಾಗಿ ಹರಿಯುವುದು. ಇವಲ್ಲದೆ ತಾಲ್ಲೂಕಿನಲ್ಲಿ ನುಗುಹೊಳೆ, ಹೆಬ್ಬಳ್ಳ, ಮಾವಿನಹಳ್ಳ, ಬರಲಹೊಳೆ, ಸುತನಳ್ಳ, ಸಾರ್ತಿಹೊಳೆ ಮುಂತಾದವು ಇವೆ. ಇವುಗಳಲ್ಲಿ ಸುತನಳ್ಳ, ಬರಲಹೊಳೆ, ವಡ್ಡಳ್ಳಿಹೊಳೆ ನೇರವಾಗಿ ಕಪಿಲಾನದಿಯನ್ನು ಸೇರಿದರೆ ಉಳಿದವು ನುಗು ಮತ್ತು ತಾರಕಾ ಕೂಡಿಸಿಕೊಂಡು ಕಪಿಲಾ ನದಿಯನ್ನು ಸೇರುವುವು. ತಾಲ್ಲೂಕಿನ ನೀರಾವರಿ ಯೋಜನೆಗಳಿಗೆ ಮುಖ್ಯವಾದದ್ದು ನುಗು ಜಲಾಶಯ. ಬೀರವಾಳದ ಬಳಿ 2,020† ಉದ್ದ, 134† ಎತ್ತರದ ಕಲ್ಲುಗಾರೆಯ ಕಟ್ಟೆಯನ್ನು ನುಗು ಹೊಳೆಗೆ ಅಡ್ಡಲಾಗಿ ಕಟ್ಟಿ ನೀರನ್ನು ವ್ಯವಸಾಯಕ್ಕೆ ಬಳಸಿಕೊಳ್ಳಲಾ ಗುತ್ತಿದೆ. ಹಾಗೇ ಇಲ್ಲಿಯ ಹೆಬ್ಬಳ್ಳಕ್ಕೆ 2,830 ಉದ್ದ, 64† ಎತ್ತರದ ಹೆಬ್ಬಳ್ಳಕಟ್ಟೆ ಕಟ್ಟಿದೆ. ಈ ತಾಲ್ಲೂಕಿನ ದೊಡ್ಡದಾದ ಕಪಿಲಾಯೋಜನೆ ಪ್ರಕಾರ ಈ ತಾಲ್ಲೂಕಿನ ಬಿದರಹಳ್ಳಿ ಬಳಿ ಕಪಿಲಾನದಿಗೆ 8,965† ಉದ್ದ 90† ಎತ್ತರ ಇರುವ ಕಟ್ಟೆ ಕಟ್ಟಲಾಗಿದ್ದು ಇದರಿಂದ ಮೈಸೂರು-ಮಂಡ್ಯ ಜಿಲ್ಲೆಗಳ ನೀರಾವರಿಗೆ ಅನುಕೂಲವಾಗಿದೆ. ತಾರಕಾಯೋಜನೆ ಯಂತೆ ತಾರಕಾ ನದಿಗೆ 3,850 ಉದ್ದ 100 ಎತ್ತರದ ಕಲ್ಲುಗಾರೆಯ ಕಟ್ಟೆ ಕಟ್ಟಲಾಗಿದೆ. ತಂಪಾದ ಹವೆಯುಳ್ಳ ಈ ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 818.25ಮಿಮೀ. 

	ತಾಲ್ಲೂಕಿನಲ್ಲಿ ಮರಳು ಮಿಶ್ರಿತ ಕೆಂಪುಮಣ್ಣಿನ ಪ್ರದೇಶ ಹೆಚ್ಚು. ರಾಗಿ, ಬತ್ತ, ನೆಲಗಡಲೆ, ಜೋಳ, ತಂಬಾಕು, ಹತ್ತಿ, ಮೆಣಸಿನಕಾಯಿ, ದ್ವಿದಳಧಾನ್ಯಗಳನ್ನೂ ಬೆಳೆಯಲಾಗುತ್ತಿದೆ. ಇತ್ತೀಚೆಗೆ ನೀರಾವರಿ ಪ್ರದೇಶ ಹೆಚ್ಚುತ್ತಿದ್ದು ಇತರ ಬೆಳೆಗಳನ್ನೂ ಬೆಳೆಯುತ್ತಿದ್ದಾರೆ. ಅರಣ್ಯೋತ್ಪಾದನೆ ಅವಲಂಬಿತ ಕೆಲವು ಗೃಹ ಕೈಗಾರಿಕೆಗಳಿವೆ. ತಾಲ್ಲೂಕಿನಲ್ಲಿ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಹೆದ್ದಾರಿಗಳಿವೆ. 

	ಹೆಗ್ಗಡದೇವನಕೋಟೆಯ ದಕ್ಷಿಣದಲ್ಲಿ, ಸರಗೂರಿನ ಪಶ್ಚಿಮಕ್ಕೆ 11 ಕಿಮೀ ದೂರದಲ್ಲಿರುವ ಕಿತ್ತೂರು ಕಪಿಲಾನದಿಯ ಬಲದಂಡೆಯ ಮೇಲಿದೆ. ಇದು ಪುನ್ನಾಡ ದೊರೆಗಳ ರಾಜಧಾನಿಯಾಗಿತ್ತೆಂದೂ ಇಲ್ಲಿಯ ದೊರೆ ಸ್ಕಂದವರ್ಮನ ಮಗಳನ್ನು ಗಂಗದೊರೆ ಅವಿನೀತ ಮದುವೆಯಾದ ನೆಂದೂ ತಿಳಿದುಬರುವುದು. ಇಲ್ಲಿಯ ಹನ್ನೊಂದನೆಯ ಶತಮಾನದ ಒಂದು ಶಾಸನದಲ್ಲಿ ಇದನ್ನು ರಾಜವಾಸಸ್ಥಾನ, ಕೀರ್ತಿಪುರ ಪಟ್ಟಣ ಎಂದು ಮುಂತಾಗಿ ಕರೆಯಲಾಗಿದೆ. ಸರಗೂರಿನ ನೈಋತ್ಯಕ್ಕೆ 11 ಕಿಮೀ ದೂರದಲ್ಲಿ ಕಪಿಲಾನದಿಯ ಬಲದಂಡೆಯ ಮೇಲಿರುವ ಮಳಲಿ ಗ್ರಾಮದಲ್ಲಿ ಎರಡು ಜೈನ ಬಸದಿಗಳಿವೆ. ತಾಲ್ಲೂಕಿನ ಪಶ್ಚಿಮದ ಎಲ್ಲೆಯಲ್ಲಿ ವ್ಯಾಪಿಸಿರುವ ಕಾಕನಕೋಟೆ ಕಾಡು ಖೆಡ್ಡ ಕಾರ್ಯಕ್ರಮಕ್ಕೆ ಹೆಸರಾಗಿತ್ತು.	
				*
	ಹೆಗ್ಗಡದೇವನಕೋಟೆ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಮೈಸೂರಿಗೆ ನೈಋತ್ಯದಲ್ಲಿ 52 ಕಿಮೀ ದೂರದಲ್ಲಿದೆ. ಜನಸಂಖ್ಯೆ 12,043. ಅರಣ್ಯೋತ್ಪನ್ನ ವಸ್ತುಗಳಿಗೆ ಸಂಬಂಧಿಸಿದ ಗೃಹಕೈಗಾರಿಕೆಗ ಳಿರುವ ಈ ಪಟ್ಟಣ ತಾರಕಾ ನದಿಯ ಎಡದಂಡೆಯ ಮೇಲಿದೆ. ಮೈಸೂರು-ಮಾನಂದವಾಡಿ ರಸ್ತೆ, ಹುಣಸೂರು-ಬೇಗೂರು ರಸ್ತೆಗಳು ಈ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುತ್ತವೆ. ಇವುಗಳ ಜೊತೆಗೆ ನೆರೆಹೊರೆಯ ಗ್ರಾಮಗಳಿಗೆ ರಸ್ತೆ ಸಂಪರ್ಕವಿದೆ. 		
	(ಡಿ.ಸಿ.ಜೆ.; ಪಿ.ಜಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ